ಶನಿವಾರ, ಏಪ್ರಿಲ್ 2, 2011

"ಭಾವ ಬಂಧುಗಳ ಭಾವನಾತ್ಮಕ ಪ್ರತಿಕ್ರಿಯೆ"ಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು.


ಕಾಲ ಕಳೆಯಲು, ಮನ ಹಗುರಗೊಳಿಸಲು ನಾನು ಕಂಡುಕೊಂಡಿರುವ ದಾರಿ, ಬರೆಯುವುದು, ದು:ಖವಾಗಲಿ, ಸಂತೋಷವಾಗಲಿ...
ಬರೆದೊಡನೆ ಒಂಥರಾ ಆಗುವುದು ನೆಮ್ಮದಿಯ ನಿಟ್ಟುಸಿರು, ಇಲ್ಲದಿದ್ದರೆ ಮನದಲ್ಲೇ ಏನೋ ಕದನ, ಒತ್ತಡ, ( ಮಾನಸಿಕ ದೌರ್ಬಲ್ಯವೇ?) . ನನಗೆ ಮಾತ್ರ ಹೀಗೆಯೋ ಅಥವಾ ಬೇರೆಯವರಿಗೂ ಹೀಗಾಗುತ್ತ?
ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ, ಬರೆಯುವುದು ಅನಿವಾರ್ಯ.. ಮಾನಸಿಕ ಚಿಕಿತ್ಸೆ ನನಗೆ , ಅದಕ್ಕೇ ಬರೆಯುತ್ತೇನೆ, ನನ್ನನ್ನು ನಾನೇ ಸಮಾಧಾನಿಸಿಕೊಳ್ಳುತ್ತೇನೆ,
ಆದರೂ ಅದನ್ನು ಹಲವರು ಓದಿ ಸ್ಪಂದಿಸಿದಾಗ ಆ ಸಮಾಧಾನ ಇಮ್ಮಡಿಸುತ್ತೆ, ಮನಸ್ಸು ಒಂಥರಾ ನಿರಾಳವಾಗುತ್ತೆ , ಸ್ಥಿರವಾಗುತ್ತೆ, ಇಂತಹ ನನ್ನ "ಭಾವ ಬಂಧುಗಳ ಭಾವನಾತ್ಮಕ
ಪ್ರತಿಕ್ರಿಯೆ"ಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು.

"ಇದು ಯಾರು ಬರೆದ ಕಥೆಯೋ....ನನಗಾಗಿ ಬಂದ ವ್ಯಥೆಯೋ..

ಮಕ್ಕಳ ಮುಂದೆ  ಹೆತ್ತವರು ಕಣ್ಮುಚ್ಚಿಕೊಳ್ಳುವುದು ಸ್ವಾಭಾವಿಕ, ಆದರೆ ಹೆತ್ತವರ ಕಣ್ಮುಂದೆ ಮಕ್ಕಳು ಕಣ್ಮಚ್ಚಿಕೊಂಡರೆ....
"ಭಾವಧಾರೆ"ಯ ಆರಂಭದ ವೇಳೆ ಹೆತ್ತವಳ ನೆನಪಾಗಿ ಬಂದ ಪದಗಳಾಯಿತು "ಅಮ್ಮನಿಗೆ",   ಆದರೆ.......ಅದರ ಹಿಂದೆಯೇ
ಈಗ ಬರೆಯಬೇಕಾಗಿ ಬಂತು...ಮತ್ತೆ ಮತ್ತೆ ಬರೆಯುತ್ತಿರುತ್ತೇನೆ.....  ಹೆತ್ತ ಮಗನ ನೆನಪುಗಳು....ಇದು ಯಾರು ಬರೆದ ಕಥೆಯೋ....ನನಗಾಗಿ ಬಂದ ವ್ಯಥೆಯೋ..........ದೇವರೇ(ಇದ್ದರೆ) ಮುಂದೆ ಯಾರಿಗೂ ಹೀಗಾಗದಿರಲಿ....
ನನ್ನ ಮಗನ ಜನ್ಮ ನಾಮ "ಪ್ರೇರಣ", ವ್ಯವಹಾರ ನಾಮ "ಸತ್ಯಧರ", ನಾವು ಪ್ರೀತಿಯಿಂದ ಕರೆಯುತ್ತಿದ್ದುದು " ಮುದ್ದು", "ಕಂದು", "ಬಂಗಾರ" ಎಂದು. ಅವರ ತಾತ "ಭಟ್ಟ" ಎಂದು, ಗೆಳೆಯರು "ಸತ್ಯು" ಎಂದೂ ಕರೆಯುತ್ತಿದ್ದರು.  ಸತ್ಯಕ್ಕೆ ಸಾವಿಲ್ಲ ಅಂತೆಯೇ "ಸತ್ಯು"ವಿಗೂ ಕೂಡ .   ಇದೋ ಈ ಸಾಲುಗಳು ........ಮರೆಯಾಗಿದ್ದರೂ ನಮ್ಮ ಉಸಿರಿನಲ್ಲಿ ಉಸಿರಾಗಿರುವ, ನನ್ನ ಕೊನೆಯುಸಿರುವವರೆಗೂ ಮನಸಿನಲ್ಲಿ ಹಸಿರಾಗಿರುವ, ದಿನವೂ ಕನಸಿನಲ್ಲಿ ಬಂದು ನನ್ನೊಡನಿರುವ "ನನ್ನ ಕಂದ" ನಿಗಾಗಿ .

"ಸತ್ಯಾವತಾರ ಸತ್ಯಧರ"
"ಮುದ್ದು" "ಕಂದ" ನಾಗಿ ಹುಟ್ಟಿ
"ಪ್ರೇರಣ"ನಾಗಿ ನಮ್ಮ ಬಾಳಿಗೆ
"ಸತ್ಯಧರ" ಎಂಬ ಹೆಸರಿನಿಂದ
ನಮ್ಮ ಬಾಳಿನ "ಬಂಗಾರ" ವಾದೆ

ಆಡಿದೆ ಪಾಡಿದೆ ನಲಿದೆ ಕುಣಿದೆ
ನಲಿಸಿದೆ ಕುಣಿಸಿದ ನಗಿಸಿದೆ ಎಲ್ಲರ
ಜಗವನು ತೋರಿದೆ ಕೃಷ್ಣನ ಹಾಗೆ
ಪ್ರೀತಿಯ "ಸತ್ಯು" ನೀನೆಲ್ಲರಿಗೆ

ಮಗುವು, ಗುರುವು, ಗೆಳೆಯನು ನೀನು
ತಂದೆಯು ನೀನು, ತಾಯಿಯು ನೀನು
ಜನಿಸಿದೆ ಜಗದೋದ್ದಾರಕೆ
ಏನು ಪೊಗಳಲಿ ನಿರ್ಭಾಗ್ಯಳು ನಾನು

ಎಲ್ಲರ ನೋವು ನೀ ಪರಿಹರಿಸಿ
ಎಲ್ಲರ ಮುದ್ದಿನ ಕಣ್ಮಣಿಯಾಗಿ
ಎಲ್ಲರ ಮುಂದೇ ಕಣ್ಮರೆಯಾದೆ
ಎಲ್ಲರ ಮನದಲು ನೀ ನೆಲೆಯಾದೆ

ನೀನಿಲ್ಲದೆ ಬರಿದಾಗಿದೆ ಬಯಲು
ಬಾಳಲಿ ತುಂಬಿದೆ ಬರಿದೇ ಕತ್ತಲು
ಸಂಭವಿಸು ಮತ್ತೆ ಈ ಧರೆಯಲ್ಲಿ
ನಿನ್ನ ಆತ್ಮಕೆ ಶಾಂತಿಯು ಸಿಗಲಿ

"ಅವತಾರ ವರಿಷ್ಠ  ಸತ್ಯಾವತಾರ"
ನಿನ್ನ ಹೆಸರು ಸದಾ ಅಮರ
*****************************

ಬುಧವಾರ, ಮಾರ್ಚ್ 30, 2011

"ಸುತ"ನನ್ನು ಕಳೆದುಕೊಂಡಳು "ದೇವಿಸುತೆ", "ಭಾವಧಾರೆ"ಯಾಯಿತು "ಅಶೃಧಾರೆ", "ವಿಕೃತ"ವಾಯಿತು "ವಿಕೃತಿ" ಸಂವತ್ಸರ.


ಅದೃಶ್ಯರಾದರೂ ಬರಹದಿಂದ ಆತ್ಮೀಯರಾದ ನನ್ನ ಭಾವಬಂಧುಗಳೇ,
ಮಗನ ಆಟ ಪಾಠ ಬೆಳವಣಿಗೆಗಳನ್ನು  ಗಮನಿಸುತ್ತಾ, ಕಣ್ಮನಗಳಲ್ಲಿ ಸವಿಯುತ್ತಾ , ನಲಿಯುತ್ತಾ, ಸುಂದರ ಸಂಸಾರದ ಆನಂದವನ್ನು  ಅನುಕ್ಷಣವೂ ಅನುಭವಿಸುತ್ತಾ  ಸಂತೋಷ, ಸಂಭ್ರಮದ ನಡುವೆ  ಭಾವಧಾರೆ ಹರಿಸಲು ಸಮಯವೇ ಆಗಲಿಲ್ಲ, ಹಲವು ಬಾರಿ ಬರೆಯಲು ಕುಳಿತರೂ ಅದೇಕೋ ಆಗಲೇ ಇಲ್ಲ. ಈಗ,   ಹೆಚ್ಚು ಕಡಿಮೆ  ವರುಷದ ಮೇಲೆ ೩ ತಿಂಗಳ ನಂತರ ಬದುಕಿನಲ್ಲಿ  ಬೇರೆ ದಾರಿಯೇ ಕಾಣದೆ ತೆರೆಯುತ್ತಿದ್ದೇನೆ ಭಾವಧಾರೆಯ ಬಾಗಿಲು,   ನಿಮ್ಮೊಡನೆ ನನ್ನ ಕಣ್ಣೀರ ಕಥೆ ಹೇಳಿಕೊಳ್ಳಲು, ಮನ ಹಗುರಮಾಡಿಕೊಳ್ಳಲು........

"ಭಾವಧಾರೆ"ಯ ಮಡಿಲಾಯಿತು ಬರಿಯ ನೋವಿನ ಕಡಲು. ಬರೆದರೆ ಹಗುರಾಗುವುದು ಒಡಲು ಎಂದೆನಿಸಿ ಬರೆಯುತ್ತಿದ್ದೇನೆ ಮನಸಿಗೆ ಭಾರವಾಗುವ ಈ ಸಾಲುಗಳು. ನಾನೆಂಥ ನಿರ್ಭಾಗ್ಯಳು, ಅದಕ್ಕೇ ಅನಿಸುವುದು ಒಮ್ಮೊಮ್ಮೆ "ನಾನಿನ್ನೂ ಬದುಕಬೇಕೆ?" ಎಂದು. ಹೌದು, ಅದಕ್ಕೆ ಕಾರಣ ದು:ಖಮಯವಾದ ನನ್ನ ಜೀವನ. ಇಂದಿಗೆ ಸರಿಯಾಗಿ ೩ ತಿಂಗಳು,  "ಸುತ"ನನ್ನು ಕಳೆದುಕೊಂಡಳು "ದೇವಿಸುತೆ", "ಭಾವಧಾರೆ"ಯಾಯಿತು "ಅಶೃಧಾರೆ", "ವಿಕೃತ"ವಾಯಿತು "ವಿಕೃತಿ" ಸಂವತ್ಸರ., ನಮ್ಮ ಬಾಳಿನ ಸಂತೋಷ ಕೊನೆಯಾಯಿತು ೨೦೧೦ರ ವರುಷದ ಕಡೆಯ ದಿನ, ಡಿಸೆಂಬರ್ ೩೧, ಶುಕ್ರವಾರ ಬೆಳಗಿನ ೩.೧೫ರ ಸಮಯ.  ಗುರುವಾರ ಸಂಜೆ ಏಳರ ವೇಳೆ ಆಸ್ಪತ್ರೆಯೊಳಗೆ ನಡೆದುಕೊಂಡೇ ಬಂದ ಕಂದ, ಹನ್ನೊಂದೂವರೆ ವರುಷದ ನಮ್ಮ ಒಬ್ಬನೇ ಮಗ "ಸತ್ಯಧರ", ಲೋ ಬಿ.ಪಿ ಆಗಿದೆ ಅಂತ  ಐ.ಸಿ.ಯುಗೆ ಸೇರಿಸಿಕೊಂಡರು, ಗಾಬರಿಯಾಗುವಂತಹುದೇನಿಲ್ಲವೆಂದರು, ಚೆನ್ನಾಗೇ ಮಾತನಾಡುತ್ತಿದ್ದ, ಆಗಾಗ್ಗೆ ನೀರು ಕುಡಿಯುತ್ತಿದ್ದ, ಎರಡು ಮೂರು ದಿನದಿಂದ  ಜ್ವರ ಜೊತೆಗೆ ಆ ದಿನ ನಾಲ್ಕೈದು ಬಾರಿ ಹಸಿರು ನೀರಿನ ವಾಂತಿಯಾಗಿತ್ತು, ಸಾಮಾನ್ಯವಾಗಿ ಹಿಂದೆಯೂ ೩-೪ ಬಾರಿ ಹೀಗಾದಾಗೆಲ್ಲಾ ಆಸ್ಪತ್ರೆಗೆ ಸೇರಿಸಿ ಒಂದೆರಡು ದಿನ ಚಿಕಿತ್ಸೆಯ ನಂತರ ಆರೋಗ್ಯ ಸುಧಾರಿಸಿ ಹಿಂತಿರುಗುವುದು ಸಾಮಾನ್ಯವಾಗಿತ್ತಾದರೂ,   ಆಗ ವಾರ್ಡಿನಲ್ಲಿರುತ್ತಿದ್ದೆವು.  ಆದರೆ ಈಗ ಐ.ಸಿ.ಯು ಏಕೆಂದು, ವಾರ್ಡಿಗೆ ಹೋಗೋಣವೆಂದು ಅವನೇ ಕೇಳಿದಾಗ  ಇರಲಿ ಬಿಡು ಹೆಚ್ಚಿನ ನಿಗಾ ಇರುತ್ತೆ , ಬೆಳಿಗ್ಗೆ ವಾರ್ಡಿಗೆ ಶಿಫ್ಟ್ ಆಗಿ ನಂತರ  ಡಿಸ್ಚಾರ್ಜ ಅಗಿ ಮನೆಗೆ ಹೋಗುತ್ತೇವಲ್ಲ ಎಂದು ಹೇಳಿದೆ.  ರಾತ್ರಿ ೧೨ ಗಂಟೆಯಲ್ಲೂ ಕೇಳಿ ನೀರು ಕುಡಿದ, ಆದರೆ ಅದೇ ವೇಳೆ ವೈದ್ಯರು  ಅವನಿಗೆ ಉಸಿರಾಟದಲ್ಲಿ ಏರಿಳಿತವಾಗುತ್ತಿದೆಯೆಂದೂ, ವೆಂಟಿಲೇಷನ್ ಹಾಕಬೇಕೆಂದೂ ಮನೆಯವರ ಅನುಮತಿ ಕೇಳಿರೆಂದು ಹೇಳಿದಾಗ ನನ್ನ ಎದೆ ಬಡಿತ ನಿಂತು ಹೋದಂತಾಯಿತು.  ಕೂಡಲೇ ಮನೆಯಲ್ಲಿ ಒಬ್ಬರೇ ಇದ್ದ ನನ್ನವರಿಗೆ  ಫೋನ್ ಮಾಡಿದೆ. ಅವರು ಅದಕ್ಕೆ ಅನುಮತಿಸಿ ಕೂಡಲೇ ಬರುವೆನೆಂದು ಹೇಳಿ ಬರುವ ಹೊತ್ತಿಗಾಗಲೇ ಅದೇನಾಯಿತೋ? ಇದ್ದಕ್ಕಿದ್ದಂತೆ ವೈದ್ಯರೂ ,ದಾದಿಯರೂ ಅತ್ತಿಂದಿತ್ತ ಓಡಾಡತೊಡಗಿದುದನ್ನು ನೋಡಿ ಏಕೆಂದು ಕೇಳಿದಾಗ ಅವರು ದೇವರ ಧ್ಯಾನ ಮಾಡಿ ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆಂದಾಗ ಎಲ್ಲಾ ದೇವರಲ್ಲೂ ಬೇಡಿಕೊಳ್ಳಲಾರಂಭಿಸಿದೆ.  ಆಗಲೂ ಹೀಗಾಗಬಹುದೆನಿಸಲಿಲ್ಲ,  ಆದರೆ ಹೀಗಾಗಿಯೇಬಿಟ್ಟಿತು, ಮತ್ತೆ ಕಣ್ತೆರೆಯಲಿಲ್ಲ ನನ್ನ ಕಂದ.  ನಮ್ಮ ಜೀವನದ ಕನಸು ಅವನೊಂದಿಗೇ ಸುಟ್ಟು ಹೋಯಿತು.  ೩ ,೪ ಸಲ ಎಲ್ಲಿಗೆ ಅಳುತ್ತಾ ಹೋಗಿ ನಗುತ್ತಾ ಹೊರಗೆ ಬಂದಿದ್ದೆವೋ ಅಲ್ಲಿಗೆ ಈ ಸಲ ನಗುತ್ತಾ ಹೋಗಿ ಅಳುತ್ತಾ ಬರುವಂತಾಯಿತು.

 ಎರಡು ದಿನದ ಹಿಂದೆ ಹತ್ತಾರು ಹುಡುಗರ ಜೊತೆಗೂಡಿ ಮನೆಯ ಮುಂದೆ ಬೆಳಗಿನಿಂದ ಸಂಜೆಯವರೆಗೂ ಬೇ ಬ್ಲೇಡ್ ಆಡಿಕೊಂಡು, ಸಂಜೆ ದೇವರ ಸ್ತೋತ್ರಗಳನ್ನು ಹೇಳಿ, ಗಿಟಾರ್ ನುಡಿಸಿ ( ಅವನಿಗೆ ಗಿಟಾರ್ ಅಂದ್ರೆ ತುಂಬಾ ಇಷ್ಟ, ತಿಂಗಳ ಹಿಂದೆ ಕಲಿಯಲು ಸೇರಿದ್ದ,  ತಾನೇ ಪ್ರಯತ್ನಿಸಿ "ಟ್ವಿಂಕಲ್ ಟ್ವಿಂಕಲ್" ನುಡಿಸಿದ, ಅದನ್ನು ನಾನು ನನ್ನ ಎಂದಿನ ಹವ್ಯಾಸದಂತೆ ವೀಡಿಯೋ ಕೂಡ ತೆಗೆದೆ ) ರಜೆಯಿದ್ದುದರಿಂದ ರಾತ್ರಿ ಹನ್ನೆರಡು ಗಂಟೆವರೆಗೂ ಟಿವಿಯಲ್ಲಿ  ಯಾವುದೋ ಇಂಗ್ಲೀಷ್ ಸಿನೆಮಾ ನೋಡುತ್ತಿದ್ದ,   ಸಾಕು ನೋಡಿದ್ದು ಮಲಗಿಕೋ ಎಂದು ಅವರ ತಂದೆ ಹೇಳಿದುದರಿಂದ ಸರಿಯೆಂದು ಮಲಗಿದ. ಹೀಗೆ ಸಖತ್ತಾಗಿ ಆಡಿಕೊಂಡಿದ್ದ "ಸತ್ಯು" ಈಗಿಲ್ಲ!

 ಇದೇ ಹದಿನೈದು ದಿವಸ ಮುನ್ನ ನಮ್ಮ ಮನೆಯಲ್ಲಿ ನನ್ನ ಸೋದರನ ಮದುವೆಯ ಕಾರಣ ನಮ್ಮ ಮನೆಯಲ್ಲಿ ಅದೇನು ಸಂಭ್ರಮ! ತಾನೇ ಆಯ್ಕೆಮಾಡಿ ತೆಗೆದುಕೊಂಡಿದ್ದ ಬಗೆ ಬಗೆಯ  ಡ್ರೆಸ್ ಹಾಕಿಕೊಂಡು, ಹೇರ್ ಸ್ಪೈಕ್ ಮಾಡಿಕೊಂಡು ನಡೆ ನುಡಿಯಲ್ಲಿ ಅವನದೇ ವಿಶಿಷ್ಟವಾದ ಸ್ಟೈಲಿನಿಂದ  ಎಲ್ಲರ ಕೇಂದ್ರಬಿಂದುವಾಗಿದ್ದ,  ನನ್ನ ಅಕ್ಕನ ಮಗಳಿಗೆ ತಿಂಗಳ ಹಿಂದೆ ಗಂಡು ಮಗುವಾಗಿದ್ದು ನೋಡಿ ತಾನು ಆ ಮಗುವಿನ ಮಾವನಾದೆನೆಂದು ಬೀಗುತ್ತಿದ್ದ.  ಅವನಿಗೆ ಬರ್ತಡೇ(೨೬ ಮೇ) ಆಚರಿಸಿಕೊಳ್ಳುವುದೆಂದರೆ ತುಂಬಾ ಇಷ್ಟ. ಹತ್ತನೇ ವರುಷದವರೆಗೂ(೨೦೦೯) ನಾವೂ ಎಲ್ಲರನ್ನೂ ಕರೆದು ತುಂಬಾ ಗ್ರಾಂಡ್ ಆಗೇ ಅವನ ಬರ್ತಡೇ ಮಾಡಿದ್ದೆವು, ಕೆಲವರು ಹಾಗೆ ಮಾಡಬೇಡಿ, ದೃಷ್ಟಿಯಾಗುತ್ತೇ ಅದಕ್ಕೇ ಅವನಿಗೆ ಆಗಾಗ್ಗೆ ಅನಾರೋಗ್ಯವಾಗುತ್ತೇ ಎಂದು ಹೇಳಿದ್ದುಂಟು.  ಅದಕ್ಕೇ ಈ ಸಲ ಎಂದಿನಂತೆ ಅವನ ಜನುಮದಿನದ ಪ್ರಯುಕ್ತ ಬರೇ ಹೋಮ ಹಾಗು ಸತ್ಯನಾರಾಯಣ ಪೂಜೆ ಮಾಡಿದೆವು. ಆದರೂ ಹೀಗೇಕಾಯ್ತು?

ಎಷ್ಟು ಒಳ್ಳೆಯ ಗುಣಗಳಿದ್ದವು ಅವನಿಗೆ! ಅವನ ಗೆಳೆಯರಿಗೆ ಅದರಲ್ಲೂ ಒಬ್ಬನಿಗೆ (ಅವರ ತಾಯಿ ತೀರಿಕೊಂಡಿದ್ದರು) ತುಂಬಾ ಇಷ್ಟವೆಂದು ಚಪಾತಿ , ಈರುಳ್ಳಿ ಮತ್ತು ಟೊಮೇಟೋ ಗೊಜ್ಜು ಮಾಡಿಸಿಕೊಂಡು ಡಬ್ಬಿಗೆ ಹೆಚ್ಚು ತಿಂಡಿ ಹಾಕಿಸಿಕೊಂಡು ಹೋಗುತ್ತಿದ್ದ. ಸದಾ ಗೆಳೆಯರೊಡನೆ ಆಡುತ್ತಾ ಕಳೆದ ಒಂದು ವರುಷವನ್ನಂತೂ ನಾನು ಕಂಡಂತೆ ತುಂಬಾ ಸಂತೋಷದಿಂದ ಕಳೆದ.
ಗೆಳೆಯರೊಡನೆ ಕೂಡಿ ಮನೆಯ ಮುಂದೆ ಹೋಳಿ ಆಡಿದ್ದೇನು, ಫುಟ್ಬಾಲ್, ಕ್ರಿಕೆಟ್, ಕಂಪ್ಯೂಟರ್ ಗೇಮ್ಗಳು, ಪ್ಲೇ ಸ್ಟೇಷನ್( ಪಿ.ಎಸ್. ಪಿ ) , ಲಗೋರಿ, ಚೂರ್ ಚೆಂಡು,ಒಂದೆರಡಲ್ಲ! ಎಲ್ಲಿಯೋ ಅನಾಥವಾಗಿದ್ದ ೫ ನಾಯಿಮರಿಗಳನ್ನು ತಂದು , ಹಾಲು ಅನ್ನ ಹಾಕಿ, ಇಟ್ಟಿಗೆಗಳನ್ನು ತಂದು ಗೂಡು ಮಾಡಿ , ನಾಯಿಮರಿಗಳನ್ನು ಕೈಲಿ ಎತ್ತಿಕೊಂಡು (ಅವನು ಅದುವರೆವಿಗೂ ಮುಟ್ಟಿರಲಿಲ್ಲ)
ಏನೋ ಸಾಧಿಸಿದ ಹಾಗೆ ಮೆರೆದಿದ್ದ. ನಾವೇನೂ ಸಿರಿವಂತರಲ್ಲದಿದ್ದರೂ ಅವರ ತಂದೆ ಅವನಿಗೇನೂ ಕಡಿಮೆ ಮಾಡಿರಲಿಲ್ಲ. ಕೇಳಿದ್ದಲ್ಲಾ ಕೊಡಿಸಿದ್ದರು, ಅವನ ನಗುವೆ ನಮ್ಮ ನಗುವಾಗಿತ್ತು. ಅವನ ಇಷ್ಟದಂತೆ ವಾರದ ನಂತರ ಹೊಸ ಕಾರು ತೆಗೆಕೊಳ್ಳಲು ಸಿದ್ದವಾಗಿದ್ದರು. ನಾನೇ ಅಂತಹ ಆಸೆಗಳಿಗೆ, ಎಲ್ಲವನ್ನೂ ಕೊಡಿಸುವುದಕ್ಕೆ ವಿರೋಧಿಸುತ್ತಿದ್ದೆ, ಅದು ಸರಿಯಲ್ಲವೆಂದು ಈಗೆನಿಸುತ್ತಿದೆ. ಈಗಿನ ಮಕ್ಕಳೇ ಹಾಗೆ, ಅವರಂತೆ ನಾವಿರಬೇಕು. ಆಸ್ಪತ್ರೆಗೆ ಹೋಗುವ ಬದಲು ಕಾರ್ ಷೋ ರೂಮ್ಗೆ ಹೋಗಿದ್ದಿದ್ದರೆ ಚೆನ್ನಾಗಿತ್ತೇನೋ?
ಅವನ ನಡೆ, ನುಡಿ, ನಗು ಅದೇನು ಚೆಂದವಿತ್ತು! ಎಲ್ಲರೂ ಅದನ್ನು ನೆನಪಿಸಿಕೊಳ್ಳುತ್ತಾರೆ. ತುಂಬಾ ಪ್ರಬುದ್ದನಂತೆ ಮಾತಾಡುತ್ತಿದ್ದ, ಹಾಗೇ ನಡವಳಿಕೆಯಲ್ಲೂ. ಎಲ್ಲವನ್ನೂ, ಎಲ್ಲರನ್ನೂ ಚೆನ್ನಾಗಿ ಗಮನಿಸಿ ತಂತಾನೇ ಅರಿತುಕೊಳ್ಳುತ್ತಿದ್ದ. ಅವನಿಗೆ ಹೇಳಿ ನಾವೇ ತಪ್ಪು ಮಾಡಿದರೆ ಪ್ರಶ್ನಿಸುತ್ತಿದ್ದ, ನ್ಯಾಯದ ಪರವಾಗಿದ್ದ.

ಉಪನಯನ(ಮುಂಜಿ) ಮಾಡಿಸಿಕೊಳ್ಳಲು ತುಂಬಾ ಹಾತೊರೆದಿದ್ದ. ಆದರೆ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲವಾದ್ದರಿಂದ ಈ ವರುಷದ ಜನುಮ ದಿನದ ನಂತರ ಮಾಡೋಣವೆಂದು ನಿಶ್ಚಯಿಸಿದ್ದೆವು. ಕ್ರಿಸ್ಮಸ್ ರಜೆಯಲ್ಲಿ ಒಂದು ದಿನ ಅವನೇ ಕುಳಿತು ಮುಂಜಿಗೆ ಕರೆಯಬೇಕಾದ ಅವನ ಗೆಳೆಯರು, ನಮ್ಮ ಬಂಧುಗಳ  ಪಟ್ಟಿ ಬರೆದಿದ್ದ. ಈಗ ಅದನ್ನು ನೋಡಿದರೆ. ಅಷ್ಟೇಕೆ, ಅವನ ಎಲ್ಲ ವಸ್ತುಗಳನ್ನೂ ನೋಡುತ್ತಾ ಕಣ್ಣೀರಿಡುವುದೊಂದೇ ನಮಗುಳಿದಿರುವುದು.

ಇದರ ನಡುವೆ ನನಗೆ ನಾಲ್ಕು ವರುಷದ ಹಿಂದೆ ಎಡಗಣ್ಣಿನ ಲ್ಯಾಕ್ರಿಮಲ್ ಗ್ಲಾಂಡಿನ ಅಡಿನಾಯ್ಡ್ ಸಿಸ್ಟಿಕ್ ಕಾರ್ಸಿನೋಮ ಎಂಬ ಡೆಡ್ಲಿ ಕ್ಯಾನ್ಸರ್ ಆಗಿ, ಶಸ್ತ್ರಚಿಕಿತ್ಸೆ ಹಾಗೂ ವಿಕಿರಣ ಚಿಕಿತ್ಸೆಯಿಂದ ತಾತ್ಕಾಲಿಕವಾಗಿ ಗುಣಮುಖವಾಗಿ, ಯಾವುದೇ ಆತಂಕವಿರಲಿಲ್ಲ.  ಕಳೆದ ವರುಷ ಮತ್ತೆ ಅದು ಮರುಕಳಿಸಿ ೨೦೧೦ರ ಜುಲೈನಲ್ಲಿ ಬಯಾಪ್ಸಿ ಮಾಡಿಸಲಾಗಿದೆ. ಹೀಗಿದ್ದರೂ ಮಗುವಿನ ಮುಖ ನೆನಸಿಕೊಂಡು ಆತ್ಮವಿಶ್ವಾಸ, ಧೈರ್ಯ ಹಾಗೂ ಆಶಾಭಾವನೆಯಿಂದ , ಉತ್ಸಾಹದಿಂದಿರುತ್ತಿದ್ದೆ. ಪತ್ರಿಕೋದ್ಯಮದಲ್ಲಿ ಎಮ್.ಎ. ಮಾಡುತ್ತಿದ್ದೇನೆ, ಅದಕ್ಕೆ ನನ್ನ ಮಗನೇ ಬೆಂಬಲ, ಸ್ಫೂರ್ತಿ.
ನಾಲ್ಕು ದಿನಗಳ ಹಿಂದೆ ದಿಸೆಂಬರ್ ೨೭,೨೦೧೦ರಂದು ನಂಜನಗೂಡಿಗೆ ಹೋಗಿ ಅವನಿಗೆ ಬೆಲ್ಲದ ತುಲಾಭಾರ ಮಾಡಿಸಿ ಹರಕೆ ತೀರಿಸಿ ಬರುವಾಗ ನಾನು ಮೈಸೂರು ವಿ.ವಿ.ಗೆ ಹೋಗಿ ಅಂತಿಮ ವರ್ಷದ ಪುಸ್ತಕಗಳನ್ನು ತೆಗೆದುಕೊಂಡುಬರೋಣವೆಂದೆ, ಅದಕ್ಕವರು ನಿರಾಕರಿಸಿ ಮುಂದಿನ ವಾರ ಮತ್ತೆ ಬರೋಣವೆಂದಾಗ ಅವನು ಗಡುಸಾಗಿ ಹಾಗೂ ನನಗೆ ಬೆಂಬಲವಾಗಿ "ರೀ(ಅವನು ಅವರ ತಂದೆಯನ್ನು ಕರೆಯುತ್ತಿದ್ದುದು ಹಾಗೇ) ಈಗ್ಲೇ ಕರ‍್ಕೊಂಡು ಹೋಗ್ರೀ, ಅವ್ಳು (ನನ್ನ ಅವನು ಹಾಗೇ ಕರೆಯುತ್ತಿದ್ದ, ಅಷ್ಟು ಸಲಿಗೆ, ಸ್ನೇಹಿತನಂತಿದ್ದ, ನನಗೆ ಅದೇ ಹಿತವಿತ್ತು) ಓದ್ಲಿ" ಎಂದಿದ್ದ. ಆ
ನಂಜುಂಡೇಶ್ವರನಿಗೆ ಅವನ ತೂಕದ ಬೆಲ್ಲ ಮಾತ್ರ  ಸಾಕಾಗಲಿಲ್ಲವೇನೋ? ಅಸಲಿನ ಜೊತೆ ಬಡ್ಡಿಯನ್ನೂ ತೆಗೆದುಕೊಳ್ಳುವ ಹಾಗೆ ಅವನ ತೂಕದ ಬೆಲ್ಲದ ಜೊತೆಗೆ ಅವನನ್ನೇ ತೆಗೆದುಕೊಂಡುಬಿಟ್ಟ...

ತಿಂಗಳ ಮುನ್ನ ವೈದ್ಯರು ನನಗೆ ಈ ಮೊದಲೇ ನಾನು ಹೇಳಿದಂತೆ  ಕ್ಯಾನ್ಸರಿನ ಕಾರಣ ತುರ್ತಾಗಿ ನನ್ನ ಕಣ್ಣು ಹೊರತೆಗೆದು ಕೀಮೋಥೆರಪಿ ಮಾಡುವುದು ಅವಶ್ಯವೆಂದಾಗ ನಿರಾಕರಿಸಿ, ನನ್ನ ತಮ್ಮನ ಮದುವೆ ಹಾಗೂ ನನ್ನ ಮಗನ ಮುಂಜಿ(ಉಪನಯನ) ಆದ ನಂತರ ಬರಿಯ ಕಣ್ಣು ಮಾತ್ರ ಏನು, ತಲೆ ಬೇಕಾದರೂ ತೆಗೆಸಿಕೊಳ್ಳುತ್ತೇನೆ ಮೇಡಂ ಎಂದು ಹೇಳಿ ಬಂದಿದ್ದೆ. ಆದರೆ ಈಗ!
ಆ ದೇವರು ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ, ನನಗಿಂತ ಮೊದಲು ನನ್ನ ಕಣ್ಮುಂದೆಯೇ ಬಾಳಿನ ಕಣ್ಣಾಗಿದ್ದ ನನ್ನ ಮಗುವನ್ನು ಕಿತ್ತುಕೊಂಡುಬಿಟ್ಟ, ಎಂಥ ವಿಪರ್ಯಾಸ! ಇದಕ್ಕೇ ಹೇಳುವರೇ, ತಾನೊಂದು ಬಗೆದರೆ ಮಾನವ ಬೇರೊಂದು ಬಗೆವುದು ದೈವ!  "ಸುನಾಮಿ"ಯಂತೆ ಕ್ಷಣಮಾತ್ರದಲ್ಲಿ ನನ್ನ ಕಂದನ ಪ್ರಾಣ ಕಸಿದುಕೊಂಡುಬಿಟ್ಟ ಆ ನಿರ್ದಯಿ ದೇವರು ...
 "ಸುನಾಮಿ"ಎಂದೊಡನೆ ನೆನಪಾಗುವುದು ೨೦೦೪ರ ಡಿಸೆಂಬರಿನಲ್ಲಿ  ತಮಿಳುನಾಡಿನಲ್ಲಿ  ಆದ ದುರಂತ , ಆದರೆ ನಮಗೆ ಅದೇ ವೇಳೆ  ಮೊದಲ ಬಾರಿಗೆ ನಮಗೂ ಆಗಿತ್ತು  ೫ ವರುಷದವನಾಗಿದ್ದ ನನ್ನ ಮಗನಿಗೆ ಆದ "ಮೆನೆನ್ಜಿಟಿಸ್ "ನಿಂದ ಆಘಾತ. ಅದರಿಂದ ಪಾರಾಗಿ ಸಂತೋಷವಾಗಿದ್ದೆವಾದರೂ ಮುಂದೆ "ಡಿಸೆಂಬರ್" ಎಂದರೆ ಬೆಚ್ಚುವಂತಾಗುತ್ತಿತ್ತು. ಕೊನೆಗೂ ನಮ್ಮನ್ನು ಬೆಚ್ಚಿಸಿ ನಮಗೆ ವೈರಿಯಾದ ಡಿಸೆಂಬರ್  ೨೦೧೦ರ ವರುಷದ ಕಡೆಯ ದಿನವಾದ ೩೧ರದು ಬೆಳಕು ಮೂಡುವ  ಮೊದಲೇ ಬಾಳಿನ ಬೆಳಕಾಗಿದ್ದ ೧೨ ವರುಷದ ಮಗ 'ಸತ್ಯಧರ"ನ ಬದುಕಿಗೆ ಕೊನೆ ಹಾಡಿಯೇಬಿಟ್ಟಿತು.
ಹೇಳಿ ಈ ಸಾವು ನ್ಯಾಯವೇ?

ನೋಡಿ , ಹೇಗಿದ್ದ ನನ್ನ ಮಗ , ಹೇಗಿತ್ತು ನಮ್ಮ ಸಂಸಾರ ...... 







ಗುರುವಾರ, ಡಿಸೆಂಬರ್ 31, 2009

ಹೊಸ ವರುಷ

ಬರ,ನೆರೆ, ಸಾವು, ನೋವಿನಲಿ
ಜಾಗತಿಕ ತಾಪಮಾನದಲಿ
ನೊಂದು, ಬೆಂದು
ನಡುವೆ ಅಲ್ಲೊಂದು ಇಲ್ಲೊಂದು
ಸಾಧನೆಯ, ಸಂತಸದ
ದಿನ, ಘಳಿಗೆಗಳಲಿ ಮಿಂದು
ಕಳೆದು ಹೋಯಿತು ವರುಷ
ಬರುತಿದೆ ಹೊಸ ವರುಷ
ತರಲಿ ಪ್ರತಿ ನಿಮಿಷ
ಎಲ್ಲರಿಗು ಹರುಷ

ಎದ್ದೇಳಿ ಗೆಳೆಯ ಗೆಳತಿಯರೇ
ಬನ್ನಿ, ಒಟ್ಟಾಗಿ ಮಾಡೋಣ ಸಂಕಲ್ಪ
ದೊರಕಿಸಲು ಹಸಿದವರಿಗನ್ನವನು,
ನಿರ್ವಸತಿಗರಿಗಾಶ್ರಯವನು,
ಬರಿಯ ಬರಹದಲೇನು ಬಂತು
ಕೂಡಿ ಎಲ್ಲರು ನೀಡಿ ಬಲವನು
ಮಾಡಿದರೆ ಕೆಲಸ, ಆಗುವುದು ಮನಕೆ ಹರುಷ
ಆ ದೇವ ಮೆಚ್ಚುವನು ಈ ಕೆಲಸ
ಪ್ರೀತಿ, ಸ್ನೇಹ, ಸಹಬಾಳ್ವೆ
ಸಹಕಾರ, ಸಮರಸದಲಿ
ಆಗುವುದು ಈ ಭೂಮಿ ಕೈಲಾಸ

ಶುಕ್ರವಾರ, ಸೆಪ್ಟೆಂಬರ್ 4, 2009

ಜೈ "ಶಿಕ್ಷಕರ ದಿನ"

"ಶಿ"ರಬಾಗಿ ನಮಿಸೋಣ
"ಕ್ಷ"ಣ ಕ್ಷಣವು ನೆನೆಯೋಣ
"ಕ"ಣ್ಣುಗಳ ತೆರೆಸಿದ ಗುರುಗಳಿಗೆ

ಜೈ "ಶಿಕ್ಷಕರ ದಿನ"

ಶುಕ್ರವಾರ, ಆಗಸ್ಟ್ 14, 2009

ಸ್ವಾತಂತ್ರ್ಯದ ಶುಭದಾರತಿ

ಬೆಳಕು ಮೂಡುವ ಮೊದಲು
ಬೆಳಗೋಣ ಭಾರತಾಂಬೆಗೆ
ಸ್ವಾತಂತ್ರ್ಯದ ಶುಭದಾರತಿ

ನೆನೆಯೋಣ ಮಡಿದವರ
ಕೆಚ್ಚೆದೆಯ ವೀರರ
ಸ್ವಾತಂತ್ರ್ಯ ದಿನ ಇರಲಿ ನಿರಂತರ

ಶುಕ್ರವಾರ, ಜೂನ್ 26, 2009

ತಪ್ಪು ಮಾಡದ ಪ್ರಾಣಿ

ಅಂದು ಭಾನುವಾರ
ಬೆಳಿಗ್ಗೆ ಸುಮಾರು ಏಳು ಘಂಟೆಯ ಸಮಯ
ಇನ್ನೂ ಹಾಸಿಗೆಯಿಂದ ಎದ್ದಿರದ
ಹಗಲುಗನಸಿನ ಸವಿಯಲ್ಲಿ
ಜಗವ ಮರೆತಿದ್ದೆ
ಹಾಂ! ಕೇಳಿಸಿತು ಒಡನೆ
'ಡಮಾರ್" ಎಂಬ ಸದ್ದು
ಒಡನೆ ಗಾಬರಿಗೊಂಡು ಎದ್ದು ಓಡಿದೆ
ಅಡುಗೆಮನೆಯೆಡೆಗೆ
ಗ್ಯಾಸ್ ಸಿಲಿಂಡರ್ ಏನಾಯಿತೋ ಎಂದು !
ಅಬ್ಬ! ಏನು ಆಗಿರಲಿಲ್ಲ
ಸರಿ, ಹಾಗಿದ್ದರೆ ಸದ್ದೆಲ್ಲಿಯದು?
ಮಲಗುವ ಕೊಠಡಿಯ ಪಕ್ಕದಲ್ಲೇ
ಕೇಳಿತ್ತು ಸದ್ದು
ಆಚೆ ಹೋಗಿನೋಡಲು
ನೆರೆದಿತ್ತು ಅಲ್ಲಿ ಕಾಗೆಗಳ ಗುಂಪು
'ಕಾ ಕಾ ' ಎಂಬ ಬಿಡದ ಕೂಗು
ಬೇಕೆಂದರು ಒಮ್ಮೆಯೂ ಕಾಗೆ ಗುಬ್ಬಿಗಳು
ಕಾಣದ ಬೆಂಗಳೂರಿನ ಬಡಾವಣೆಯಲ್ಲಿ
ಇದ್ದಕ್ಕಿದ್ದಂತೆ ಇಷ್ಟೊಂದು ಕಾಗೆ ಒಟ್ಟಾಗಿ
ಕಂಡು ಬೆರಗಾಗಿ ಕುತೂಹಲದಿಂದ ನೋಡ ಹೋದೆ
ಛೆ! ಹೀಗೆ ಆಗಬಾರದಿತ್ತು !
ಅಲ್ಲಿ ಸತ್ತು ಬಿದ್ದಿತ್ತು ಒಂದು ಕಾಗೆ
ವಿದ್ಯುತ್ ತಂತಿಯ ಸ್ಪರ್ಶದಿಂದ !
ಎಂತಹ ಅಚಾತುರ್ಯ ,
ತಪ್ಪು ಮಾಡದ ಪ್ರಾಣಿಗೆ ಆಗಿತ್ತು ಶಿಕ್ಷೆ !
ಆದರು ಕಾಗೆಗಳ ಸ್ಪಂದನ ಕಂಡು
ಆಯಿತು ಆನಂದ , ಜತೆಗೆ ವ್ಯಥೆ
ನಾವು ಮನುಜರು ಹಾಗಿಲ್ಲವೆಂದು!
ನೆನೆಪಾಗಿತ್ತು ಶಾಲಾ ದಿನಗಳಲ್ಲಿ ಓದಿದ್ದ
ಕವನ ,ಕವಿ ಸಿ.ಪಿ,ಕೆ ಯವರದ್ದು
'ವಿದ್ಯುದಾಲಿಮ್ಗನಕೆ ಸಿಕ್ಕು ಸತ್ತಿದೆ ಕಾಗೆ
ತಪ್ಪು ಮಾಡದ ಪ್ರಾಣಿ ಶಿಕ್ಷೆ ಪಡೆಯುವ ಹಾಗೆ"